ಕವಿ: ಪುಲಿಗೆರೆ ಸೋಮನಾಥ == ಕವಿ - ಕಾಲ == ಸೋಮೇಶ್ವರ ಶತಕ ಬರೆದ ಕವಿ ಪುಲಿಕೆರೆ (ಪುಲಿಗೆರೆ) ಸೋಮ ನೆಂದು ನಂಬಲಾಗಿದೆ . ಕೆಲವರು ಪಾಲ್ಕುರಕೆ ಸೋಮ ನೆಂದು ಭಾವಿಸುತ್ತಾರೆ , ಆದರೆ ಕವಿಚರಿತೆ ಬರೆದ ನರಸಿಂಹಾಚಾರ‍್ಯರು ಭಾಷೆ , ವಿದ್ವತ್ತುಗಳ ದೃಷ್ಟಿಯಿಂದ ಅದು ಸಂಸ್ಕೃತ ವಿದ್ವಾಂಸನಾದ ಪಾಲ್ಕುರಕೆ ಸೋಮ ನ ದಲ್ಲವೆಂದೂ, ಭಾಷೆ ಸಡಿಲತೆ, ತಪ್ಪು ಪ್ರಯೋಗಗಳಿರುವುದರಿಂದ, ಪುಲಿಕೆರೆಯ ಸೋಮನ ಕೃತಿ ಯೆಂದೂ ನಿರ್ಧರಿಸಿದ್ದಾರೆ. ಪುಲಿಕೆರೆಯ ಸೋಮ ಕವಿಯ ಕಾಲದ ಬಗ್ಗೆ ನಿಖರತೆ ಇಲ್ಲ. ಸುಮಾರು ಕ್ರಿ. ಶ. ೧೨೦೦ -೧೩೦೦ ರಲ್ಲಿ ಇದ್ದನೆಂದು ಭಾವಿಸಲಾಗಿದೆ. ಶೋಮೇಶ್ವರ ಶತಕವು ನೀತಿ ಶಾಸ್ತ್ರವನ್ನು ಹೇಳುವ ಪದ್ಯಗಳಾಗಿವೆ . ಅವು ಮತ್ತೇ«ಭವಿ ಕ್ರೀಡಿತ ವೃತ್ತಗಳಲ್ಲಿ ರಚಿಸಲಾಗಿವೆ. ಸೋಮೇಶ್ವರ ಶತಕ ಕನ್ನಡದಲ್ಲಿ ಬಹಳಜನಪ್ರಿಯವಾದ ಕಾವ್ಯ. ಹೆಸರೇ ಹೇಳುವಂತೆ ಅದು ೧೦೦ ಪದ್ಯಗಳನ್ನು ಹೊಂದಿದೆ. ಉದಾಹರಣೆಗಾಗಿ ಕೆಲವು ಪದ್ಯಗಳನ್ನು ಕೆಳಗ ಕೊಟ್ಟಿದೆ : ಇವನನ್ನು ನಡುಗನ್ನಡ ದ ವೀರಶೈವ ಕವಿಗಳ ಸಾಲಿಗೆ ಸೇರಿಸಿದೆ .ವೀರಕೇಸರಿ ಎಂದು ಈಗ ಕರೆಯಲಾಗಿದೆ == ಪದ್ಯಗಳು == === ಸರ್ವಜ್ಞನಾಗುವ ಬಗೆ : === ಕೆಲವಂ ಬಲ್ಲವರಿಂದೆ ಕಲ್ತು ಕೆಲವಂ ಶಾಸ್ರಂಗಳಂ ಕೇಳುತಂ | ಕೆಲವಂ ಮಾಳ್ಪವರಿಂದ ಕಂಡು, ಕೆಲವಂ ಸುಜ್ಞಾನದಿಂ ನೋಡುತಂ || ಕೆಲವಂ ಸಜ್ಜನ ಸಂಗದಿಂದಲರಿಯಲ್ ಸರ್ವಜ್ಞನಪ್ಪಂ ನರಂ || ಪಲವುಂ ಪಳ್ಳ ಸಮುದ್ರವೈ ಹರಹರಾ ಶ್ರೀ ಚನ್ನ ಸೋಮೇಶ್ವರಾ ||೧|| === ಉನ್ನತ ವಸ್ತು : === ಮುಕುರಂಕೈಯೊಳಿರಲ್ಕೆ ನೀರ ನೆಳಲೇಕೈ ಕಾಮಧೇನಿರ್ದುಮೂ ಟಕೆ ಗೊಡ್ಡಾಕಳನಾಯ್ವರೇ ಗುಣಯುತರ್ ಪಾಲುಂಡು ಮೇಲುಂಬರೇ ಶುಕನೋದಿಂಗುರೆ ಚೆಲ್ವೆ ಕಾಕರವ ರಂಭಾನತ್ಯಕಂ ಡೊಂಬರೇ ಸಖರಿಂದುನ್ನತ ವಸ್ತುವೇ ಹರಹರಾ ಶ್ರೀ ಚನ್ನ ಸೋಮೇಶ್ವರಾ ||೨|| === ಬಡವ ಶ್ರೀಮಂತನಾಗ ಬಹುದು : === ಉಡುರಾಜಂ ಕಳೆಗುಂದಿ ಪೆರ್ಚದಿಹನೇ ನ್ಯಗ್ರೋಧ ಬೀಜಂ ಕೆಲಂ- ಸಿಡಿದುಂ ಪೆರ್ಮರನಾಗದೇ ಎಳೆಗರೇನೆತ್ತಾಗದೇ ಲೋಕದೋಳ್ ಮಿಡಿ ಪಣ್ಣಾಗದೆ ದೈವದೊಲ್ಮೆಯಿರೆ ತಾಂ ಕಾಲಾನುಕಾಲಕ್ಕೆ ಕೇಳ್ ಬಡವಂ ಬಲ್ಲಿದನಾಗನೇ ಹರಹರಾ ಶ್ರೀ ಚನ್ನ ಸೋಮೇಶ್ವರಾ ||೩|| === ರಾಜನ ಆಸ್ಥಾನದಲ್ಲಿ ಕವಿ ಇದ್ದರೆ ಚಂದ === ರವಿಯಾಕಾಶಕೆ ಭೂಷಣಂ ರಜನಿಗಾಚಂದ್ರಂ ಮಹಾಭೂಷಣಂ ಕುವರಂ ವಂಶಕೆ ಭೂಷಣಂ ಸರಸಿಗಂಭೋಜಾತಗಳ್ ಭೂಷಣಂ | ಹವಿಯಜ್ಞಾಳಿಗೆ ಭೂಷಣಂ ಸತಿಗೆ ಪಾತಿವ್ರತ್ಯವೇ ಭೂಷಣಂ ಕವಿಯಾಸ್ಥಾನಕೆ ಭೂಷಣಂ ಹರಹರಾ ಶ್ರೀ ಚನ್ನ ಸೋಮೇಶ್ವರಾ ||೪|| === ಸ್ವಪ್ನದಲ್ಲಿ ಕೊಳ ಗಿಳಿ ಇತ್ಯಾದಿ ಕಂಡರೆ ಒಳಿತು === ಕೊಳನಂ ತಾವರೆಯಂ ತಳಿರ್ತ ವನಮಂ ಪೂದೋಟಮಂ ವಾಜಿಯಂ ಗಿಳಿಯಂ ಬಾಲಮರಾಳನಂ ಬಸವನಂ ಬೆಳ್ವಕ್ಕಿಯಂ ಛತ್ರಮಂ | ತಳಿರಂ ಪೂರ್ಣ ತಟಾಕಮಂ ಕುಮುದಮಂ ದೇವರ್ಕಳಂ ತುಂಬಿಯಂ ತಿಳಿಯಲ್ ಸ್ವಪ್ನದಿ ಲೇಸಲೈ ? ಹರಹರಾ ಶ್ರೀ ಚನ್ನ ಸೋಮೇಶ್ವರಾ ||೫|| === ಸಂಪತ್ತಿಗೆ ಕಾರಣಗಳು === ಮತಿಯಂ ಬುದ್ಧಿಯ ಜಾಣ್ಮೆಯಂ ಗಮಕಮಂ ಗಾಂಭೀರ್ಯಮಂ ನೀತಿಯಾ - ಯತಮಂ ನಿಶ್ಚಲ ಚಿತ್ತಮಂ ನೃಪವರಾಸ್ಥಾನೋಚಿತಾರ್ಥಂಗಳಂ | ಅತಿಮಾಧುರ್ಯ ಸುಭಾಷಿತಂಗಳ ಮಹಾಸತ್ಕೀರ್ತಿಯಂ ಬಾಳ್ಕೆಯಂ ಶತಕಾರ್ಥ ಕೊಡದಿರ್ಪುದೇ ? ಹರಹರಾ ಶ್ರೀ ಚನ್ನ ಸೋಮೇಶ್ವರಾ ||೬|| == ಶಬ್ದಾರ್ಥ == ಮುಕುರ =ಕನ್ನಡಿ ; ಶುಕ =ಗಿಳಿ ; ಕಾಕ =ಕಾಗೆ ; ರವ =ಸ್ವರ ; ಉಡುರಾಜ ಚಂದ್ರ (ಉಡು=ನಕ್ಷತ್ರ) ; ಪೆರ್ಚದೆ =ಹೆಚ್ಚಾಗದೆ ; ನ್ಯಗ್ರೋಧ = ಆಲದ ಮರ ; ಬಲ್ಲಿದ =ಬಲಶಾಲಿ ; ತೊತ್ತು = ದಾಸಿ ; ರಜನಿ = ಕತ್ತಲೆ ; ಸರಸಿ =ಸರೋವರ ; ಅಂಭೋಜಾತ =ತಾವರೆ ಹೂ ; ತಳಿರ್ತ = ಚಿಗುರಿದ ; ಮರಾಳ = ಹಂಸ ಪಕ್ಷಿ ; ಬೆಳ್ವಕ್ಕಿ = ಬಿಳಿಯ ಹಕ್ಕಿ ಕೊಕ್ಕರೆ ; ಪೂರ್ಣ ತಟಾಕ = ತುಂಬಿದ ಕೆರೆ ; ಕುಮುದ = ಬಿಳಿಯ ನೈದಿಲೆ , ತಾವರೆ ಹೂ ; ಗಮಕ = ಓದುವ ಸೊಬಗು ; ನೀತಿಯಾಯತ = ವಿಸಾರವಾದ ನೀತಿ ; ನೃಪವರಾಸ್ಥಾನೋಚಿತಾರ್ಥ ರಾಜ್ಯ ಶ್ರೇಷ್ಠರ ಸಭೆಗೆ ಯೋಗ್ಯವಾದ ವಿಷಯಗಳ ಜ್ಷಾನ (ನೃಪ +ವರ+ ಆಸ್ಥಾನ+ಉಚಿತ + ಅರ್ಥ) ; ಸುಭಾಷಿತ =ನಲ್ನುಡಿ ; ಬಾಳ್ಕೆ =ಜೀವನ. == ನೋಡಿ; == ಕನ್ನಡ ಸಾಹಿತ್ಯ ಪ್ರಕಾರಗಳು ರತ್ನಾಕರ ವರ್ಣಿ ಪುಲಿಗೆರೆ ಸೋಮನಾಥ == ಉಲ್ಲೇಖ ==